ಕೊಕೊಥ್ರೈನ್ಯಾಕ್ಸ್

ಪಾಮೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಒಂದು ಜಾತಿಯ ಮರ. ಇದು ಫ್ಲಾರಿಡ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳ ಮೂಲವಾಸಿ. ಇದರಲ್ಲಿ ಸುಮಾರು 30 ಪ್ರಭೇದಗಳಿವೆ. ಇವು ಥ್ರೈನ್ಯಾಕ್ಸ್ ಎಂಬ ಜಾತಿಯ ಮರಗಳನ್ನು ಹೋಲುತ್ತವೆ. ಬಹಳಕಾಲದವರೆಗೂ ಇವನ್ನು ಥ್ರೈನ್ಯಾಕ್ಸ್ ಜಾತಿಯವೆಂದೇ ಪರಿಗಣಿಸಲಾಗಿತ್ತು. ಸಾರ್ಜೆಂಟ್ ಎಂಬ ಸಸ್ಯವಿಜ್ಞಾನಿ ಇವೆರೆಡು ಮರಗಳಿಗೂ ಹಲವಾರು ವ್ಯತ್ಯಾಸಗಳಿರುವುದನ್ನು ಗಮನಿಸಿ (1899) ಇದನ್ನು ಬೇರೆ ಜಾತಿಯಾಗಿ ವಿಂಗಡಿಸಿದ. ಕಪ್ಪುಬಣ್ಣದ ಹಣ್ಣುಗಳು, ಚಿಕ್ಕಗಾತ್ರದ ಹೂಗೊಂಚಲು ತೊಟ್ಟು, ಸುಕ್ಕು ಸಿಪ್ಪೆಯ ಬೀಜಗಳು ಇವುಗಳಿಂದಾಗಿ ಕಾಕೊ ಥ್ರೈನ್ಯಾಕ್ಸ್ ಸಸ್ಯ ಥ್ರೈನಾಕ್ಸ್ ಸಸ್ಯದಿಂದ ಭಿನ್ನವಾಗಿದೆ.

	ಕಾಕೊಥ್ರೈನಾಕ್ಸಿಗೆ 30 ಉದ್ದದ ನೀಳವಾದ ಕಂಬದಂಥ ಕಾಂಡವಿದೆ. ತುದಿಯಲ್ಲಿ ಕಿರೀಟದೋಪಾದಿಯಲ್ಲಿ ಜೋಡಣೆಯಾಗಿರುವ ಎಲೆಗಳ ಸಮೂಹವಿದೆ. ಎಲೆಗಳು ಬೀಸಣಿಗೆಯಂತಿವೆ. ಹೂಗೊಂಚಲು ತಾಳಗುಚ್ಛ ಮಾದರಿಯದು. ಹೂಗಳು ಬಲುಚಿಕ್ಕ ಗಾತ್ರದವು. ಒಂದೊಂದರಲ್ಲಿ 6 ಹಾಲೆಗಳುಳ್ಳ ಪೆರಿಯಾಂತ್ ಭಾಗ, 9 ಕೇಸರಗಳು ಮತ್ತು ಒಂದೇ ಕೋಣೆಯುಳ್ಳ ದುಂಡನೆಯ ಉಚ್ಚಸ್ಥಾನದ ಅಂಡಾಶಯ ಇವೆ. ಫಲ ಒಂದೇ ಬೀಜವುಳ್ಳ ಬೆರಿಯಂಥದು. ಮಾಗಿದಾಗ ದಪ್ಪಗೂ ರಸಭರಿತವೂ ಹೊಳೆಯುವ ಕಪ್ಪುಬಣ್ಣದ್ದೂ ಆಗುತ್ತದೆ.

	ಕಾಕೊಥ್ರೈನ್ಯಾಕ್ಸ್ ಕೈನೇಟ ಮತ್ತು ಕಾ. ಅರ್ಜೆಂಟಿಯ ಎಂಬ ಎರಡು ಪ್ರಭೇದಗಳನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ.							
(ಎನ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ